ಪುತ್ತೂರು: “ವಂದೇ ಮಾತರಂ ಎನ್ನುವುದು ಕೇವಲ ಒಂದು ಗೀತೆ ಅಥವಾ ಘೋಷಣೆಯಲ್ಲ; ಅದು ಭಾರತ ಮಾತೆಯನ್ನು ಆರಾಧಿಸುವ ಪವಿತ್ರ ಮಂತ್ರವಾಗಿದೆ. ಈ ಮಂತ್ರವು ಪ್ರತಿಯೊಬ್ಬ ಭಾರತೀಯನಲ್ಲೂ ರಾಷ್ಟ್ರಭಕ್ತಿ, ದೇಶಾಭಿಮಾನ ಮತ್ತು ಸಂಸ್ಕೃತಿಯ ಮೇಲಿನ ಗೌರವವನ್ನು ಜಾಗೃತಗೊಳಿಸುತ್ತದೆ,” ಎಂದು ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಸಿದ್ಧ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ, ‘ವಂದೇ ಮಾತರಂ ಗೀತೆಯ ಮಹತ್ವ’ದ ಕುರಿತು ಅವರು ಮಾತನಾಡಿದರು.

ಮುಂದುವರಿದು ಮಾತನಾಡಿದ ಅವರು, “ವಂದೇ ಮಾತರಂ ಗೀತೆಯು ಬ್ರಿಟಿಷರ ವಿರುದ್ಧ ನಡೆದ ವಂಗ-ಭಂಗ ಚಳವಳಿಯ ಸಂದರ್ಭದಲ್ಲಿ ರಾಷ್ಟ್ರಭಕ್ತಿಯ ಜಾಗೃತಿಗೆ ಪ್ರಬಲ ಪ್ರೇರಣೆಯಾಗಿತ್ತು. ಈ ಗೀತೆ ಅಂದಿನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ದೇಶಪ್ರೇಮ, ಆತ್ಮವಿಶ್ವಾಸ ಹಾಗೂ ತ್ಯಾಗದ ಮನೋಭಾವವನ್ನು ಅತ್ಯಂತ ಯಶಸ್ವಿಯಾಗಿ ಬಲಪಡಿಸಿತು. ಭಾರತ ಮಾತೆಯ ಮೇಲಿನ ಪ್ರೀತಿ, ತ್ಯಾಗ, ಸೇವಾ ಮನೋಭಾವ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶವನ್ನು ವಂದೇ ಮಾತರಂ ಸಾರುತ್ತದೆ” ಎಂದರು.
ಇದನ್ನೂ ಓದಿ: ಮಾನವೀಯತೆ ಮೆರೆದ ಕುಮಾರಣ್ಣ: ಸಂಕಷ್ಟದಲ್ಲಿದ್ದ ನಂಜನಗೂಡಿನ ಪೂಜಾ ಕುಟುಂಬಕ್ಕೆ ಎಚ್‌ಡಿಕೆ ಆಸರೆ
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಗೀತೆ ದೇಶಾದ್ಯಂತ ಜನರಲ್ಲಿ ಹೊಸ ಉತ್ಸಾಹ ಮೂಡಿಸಿ, ಬ್ರಿಟಿಷರ ಕ್ರೂರ ಆಡಳಿತದ ವಿರುದ್ಧ ಹೋರಾಡಲು ದಿವ್ಯ ಶಕ್ತಿ ತುಂಬಿತ್ತು. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ದೇಶದ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಅಪಾರ ಗೌರವ ಬೆಳೆಸಿಕೊಳ್ಳಬೇಕು. ಉತ್ತಮ ನಾಗರಿಕರಾಗಿ ರಾಷ್ಟ್ರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ ಗಣೇಶ್ ಪ್ರಸಾದ್ ಡಿ.ಎಸ್ ಹಾಗೂ ಉಪಪ್ರಾಂಶುಪಾಲರಾದ ಪ್ರದೀಪ್ ಕೆ. ವೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ಉಪನ್ಯಾಸಕಿ ಅಪರ್ಣ ಉಪಾಧ್ಯಾಯ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

