ಪುತ್ತೂರು: ನರಿಮೊಗರಿನಲ್ಲಿ ಮತ್ತೆ ಪುತ್ತಿಲ ಪರಿವಾರದಿಂದ ಪ್ರತಿಭಟನೆ, ಗುಡುಗಿದ ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ನರಿಮೊಗರು ಗ್ರಾಮದ ಪುರುಷರಕಟ್ಟೆ – ಶಾಂತಿಗೋಡು ಆನಡ್ಕ ಕಡೆಗೆ ಹೋಗುವ ಮಾಯಂಗಳ ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ  ಎರಡು ದಿನಗಳ ಕಾಲಾವಕಾಶ ನೀಡಿದ್ದರೂ ಯಾವುದೇ ಕಾಮಗಾರಿ ಪ್ರಾರಂಭಗೊಳ್ಳದ ಹಿನ್ನೆಲೆಯಲ್ಲಿ, ಇಂದು (ಜುಲೈ 30) ನರಿಮೊಗರು ಗ್ರಾಮ ಪಂಚಾಯತಿ ಕಚೇರಿ ಮುಂಭಾಗ ಮತ್ತೆ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಸ್ಥಳೀಯ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಗುಡುಗಿದ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಅಧಿಕಾರಿಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಯಾವ ಶಾಸಕರೂ ತಮ್ಮ ಮನೆಯಿಂದ ಅನುದಾನ ಕೊಡುವುದಿಲ್ಲ. ಅನೇಕ ಶಾಸಕರನ್ನು ನೋಡಿದ್ದೇವೆ. ಎಲ್ಲರೂ ಅವರವರ ಮನೆಗಳಲ್ಲಿ ಭರ್ತಿ ಮಾಡಿಕೊಂಡಿದ್ದಾರೆ ಎಂದರು.

ಅಧಿಕಾರಿಗಳ ವಿರುದ್ಧ ಗರಂ ಆದ ಅರುಣ್ ಕುಮಾರ್, ರಸ್ತೆ ದುರಸ್ಥಿಗೊಳಿಸದ ಹಿನ್ನೆಲೆ ಅನೇಕರು ಬಿದ್ದು ಗಾಯಗೊಂಡಿದ್ದಾರೆ. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ, ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮಿಂದಾಗಿ ನಮ್ಮ ಮೇಲೆ ಕೇಸ್ ದಾಖಲಾಗಿದೆ. ಮೊನ್ನೆಯ ಎಡವಟ್ಟು ಆಗಿರುವುದು ಗ್ರಾಮ ಪಂಚಾಯತಿಯ ಅಧಿಕಾರಿಯಿಂದ. ನಮ್ಮ ಮೇಲೆ ಕೇಸ್ ಹಕುವಾಗ ಅವರನ್ನೂ ಅದರಲ್ಲಿ ಸೇರಿಸಬೇಕಿತ್ತು. ನಾವೇ ಖರ್ಚು ಮಾಡಿ ಅವರನ್ನು ಕೋರ್ಟಿಗೆ ಕರೆದುಕೊಂಡು ಹೋಗುತ್ತಿದ್ದೆವು ಎಂದರು.

ಇದು ಆರಂಭ ಎಂದ ಅರುಣ್ ಕುಮಾರ್ ಪುತ್ತಿಲ

ತನ್ನ ಮೇಲೆ ಸಾವಿರ ಕೇಸ್ ಬಿದ್ದರೂ ಪರವಾಗಿಲ್ಲ. ಇದು ಆರಂಭ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಬಂದರೂ ಕೇಳುವ ಹಕ್ಕು ನಮಗಿದೆ. ಯಾರೂ ಇದನ್ನುಪ್ರಶ್ನಿಸುವಂತಿಲ್ಲ. ಅವ ಯಾರು ಕೇಳುವವ? ಇವ ಯಾರು ಕೇಳುವವ ಎಂದು ಪ್ರಶ್ನಿಸುವ ಅವಶ್ಯಕತೆ ಇಲ್ಲ ಎಂದು ಮತ್ತೆ ಶಾಸಕರ ವಿರುದ್ಧ ಕೆಂಡ ಕಾರಿದರು.

ಒಂದು ವಾರದ ಕಾಲಾವಕಾಶ ಕೋರಿದ ಅಧಿಕಾರಿಗಳಿಗೆ ನಾಳೆಯೇ ಚರಂಡಿ ದುರಸ್ಥಿ ಕಾರ್ಯ ಪ್ರಾರಂಭಿಸುವಂತೆ ಅರುಣ್ ಕುಮಾರ್ ಪಟ್ಟು ಹಿಡಿದರು. ಕೊನೆಗೆ ಅಧಿಕಾರಿಗಳು ಒಪ್ಪಿಕೊಂಡ ಹಿನ್ನೆಲೆ ಧರಣಿ ಹಿಂಪಡೆದರು.

ಪುತ್ತಿಲ ಪರಿವಾರದ ಅಧ್ಯಕ್ಷ ಶ್ರೀರಾಮ ಪಾತಳ, ಸಂಘಟನೆಯ ಕಾರ್ಯಕರ್ತರು, ರಿಕ್ಷಾ ಚಾಲಕರು ಹಾಗೂ ಸ್ಥಳೀಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪೊಲೀಸ್ ಬಂದೋಬಸ್ತ್

ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪುತ್ತೂರು ನಗರ ಪೊಲೀಸ್ ಠಾಣೆಯ ವತಿಯಿಂದ ಸ್ಥಳದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇದನ್ನೂ ಓದಿ: ಬಂಟ್ವಾಳ ಲಾವಣ್ಯ ಬರ್ಬರ ಹತ್ಯೆ ಪ್ರಕರಣ: ಆರೋಪಿ ಚೇತನ್ 4 ದಿನ ಪೊಲೀಸ್ ಕಸ್ಟಡಿಗೆ

ನರಿಮೊಗರು ಗ್ರಾಮದ ಪುರುಷರಕಟ್ಟೆ – ಶಾಂತಿಗೋಡು ಆನಡ್ಕ ಕಡೆಗೆ ಹೋಗುವ ಮಾಯಂಗಳ ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಆಗ್ರಹಿಸಿ ಜುಲೈ 27ರಂದು ನಡೆಸಲಾಗಿದ್ದ ರಸ್ತೆ ತಡೆ ಪ್ರತಿಭಟನೆಗೆ ಸಂಬಂಧಿಸಿದಂತೆ, ‘ಪುತ್ತಿಲ ಪರಿವಾರ’ ಸಂಘಟನೆಯ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವರ ವಿರುದ್ಧ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೂರ್ವಾನುಮತಿ ಪಡೆಯದೆ ರಸ್ತೆ ತಡೆ ನಡೆಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಈ ಕೇಸ್ ದಾಖಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *