ಮಂಗಳೂರು: ಅಂಗನವಾಡಿ ಮಕ್ಕಳಿಗೆ ನೀಡಲಾಗುವ ಪೂರಕ ಪೌಷ್ಟಿಕ ಆಹಾರವು ಸಂಪೂರ್ಣ ಸುರಕ್ಷಿತ, ಗುಣಮಟ್ಟದ ಹಾಗೂ ಶುಚಿತ್ವದಿಂದ ಕೂಡಿರಬೇಕು ಎಂಬ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಖಡಕ್ ಸೂಚನೆಯ ಬೆನ್ನಲ್ಲೇ ಅಧಿಕಾರಿಗಳು ಜಾಗೃತರಾಗಿದ್ದಾರೆ.
ಸಚಿವರ ಆದೇಶದಂತೆ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಅವರು ಮಂಗಳೂರಿನ ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ‘ಮಹಿಳಾ ಮತ್ತು ಮಕ್ಕಳ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರಕ್ಕೆ’ (MSPC) ದಿಢೀರ್ ಭೇಟಿ ನೀಡಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ನಡೆದ ಕೆಡಿಪಿ (KDP) ಸಭೆಯಲ್ಲಿ ಸಚಿವ ಯು.ಟಿ. ಖಾದರ್ ಅವರು ಅಂಗನವಾಡಿ ಮಕ್ಕಳ ಆಹಾರ ತಯಾರಿಕಾ ಕೇಂದ್ರಗಳ ತಪಾಸಣೆಗೆ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಅಂಗನವಾಡಿ ಮಕ್ಕಳಿಗೆ ಸರಬರಾಜು ಮಾಡುವ ‘ಪುಷ್ಠಿ’, ‘ಮಿಲ್ಲೆಟ್ ಲಡ್ಡು ಮಿಕ್ಸ್’ ಹಾಗೂ ಸಾಂಬಾರ್ ಪೌಡರ್ಗಳನ್ನು ತಯಾರಿಸುವ ವಿಧಾನ ಮತ್ತು ಅಲ್ಲಿನ ನೈರ್ಮಲ್ಯವನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿದರು.
ಕೇಂದ್ರದಲ್ಲಿದ್ದ ಪುಷ್ಠಿ, ಮಿಲ್ಲೆಟ್ ಲಡ್ಡು ಪೌಡರ್ ಹಾಗೂ ಸಾಂಬಾರ್ ಪೌಡರ್ಗಳ ಆಹಾರ ಮಾದರಿಗಳನ್ನು (Food Samples) ಅಧಿಕಾರಿಗಳು ಸಂಗ್ರಹಿಸಿದ್ದು, ಪರೀಕ್ಷೆಗಾಗಿ ಆಹಾರ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಲ್ಯಾಬ್ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಹಾರ ತಯಾರಿಕೆ ಮಾತ್ರವಲ್ಲದೆ ಅದರ ಪ್ಯಾಕಿಂಗ್ ಹಾಗೂ ಸುರಕ್ಷತೆಯ ಬಗ್ಗೆಯೂ ಡಾ. ಪ್ರವೀಣ್ ಕುಮಾರ್ ಕೇಂದ್ರದ ಸಿಬ್ಬಂದಿಗೆ ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ.
ಆಹಾರದ ಗುಣಮಟ್ಟ ಹಾಳಾಗದಂತೆ ಉತ್ತಮ ದರ್ಜೆಯ ‘ಫುಡ್ ಗ್ರೇಡ್ ಪ್ಲಾಸ್ಟಿಕ್’ ಬಳಸಿ ಪ್ಯಾಕಿಂಗ್ ಮಾಡಬೇಕು. ಆಹಾರ ಪ್ಯಾಕೆಟ್ಗಳ ಮೇಲೆ ತಯಾರಿಕಾ ದಿನಾಂಕ (Mfg Date), ಅವಧಿ ಮುಕ್ತಾಯ ದಿನಾಂಕ , ಬ್ಯಾಚ್ ನಂಬರ್ ಸೇರಿದಂತೆ ಲೇಬಲಿಂಗ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸೂಕ್ತ ಯಂತ್ರೋಪಕರಣಗಳನ್ನು ಬಳಸಿ ಪ್ರತಿಯೊಂದು ವಿವರವೂ ಗ್ರಾಹಕರಿಗೆ ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಬೇಕು ಎಂದು ಸೂಚಿಸಲಾಗಿದೆ.

