ಪುತ್ತೂರು: ಅಂತರಂಗದ ಕೊಳಕನ್ನು ಹೊರತೆಗೆದಾಗ ಅತ್ಯುತ್ತಮ ವಿಚಾರಧಾರೆಗಳು ನಮ್ಮೊಳಗೆ ತುಂಬಿಕೊಳ್ಳಲು ಸಾಧ್ಯ. ಸಂಸ್ಕಾರದ ಬೆಳಕನ್ನು ಒಡಮೂಡಿಸಿಕೊಂಡಾಗ ಮಾತ್ರ ನಮ್ಮೆದುರಿನ ದಾರಿ ಸ್ಪಷ್ಟವಾಗುತ್ತಾ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾಸಂಸ್ಥೆಯಲ್ಲಿ ಪಠ್ಯದೊಂದಿಗೆ ಸಿಗುವ ಇತರ ವಿಚಾರಗಳನ್ನು ಕಡೆಗಣಿಸದೆ ಆದ್ಯತೆಯ ಮೇರೆಗೆ ಸ್ವೀಕರಿಸಬೇಕು ಎಂದು ಪ್ರೇರಣಾದಾಯಿ ಮಾತುಗಾರ ಡಾ.ರಾಹುಲ್ ದೇವರಾಜ್ ಹೇಳಿದರು.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶನಿವಾರ ಮಾತನಾಡಿದ ಅವರು, ಇಂದಿನ ಜಗತ್ತು ಕೌಶಲ್ಯವನ್ನು ಬೇಡುತ್ತದೆ. ಹಾಗಾಗಿ ಕೇವಲ ಪದವಿಗಳನ್ನು ಹೊಂದಿದ ಮಾತ್ರಕ್ಕೆ ಔದ್ಯೋಗಿಕ ಬದುಕು ಸಿದ್ಧವಾಗಲಾರದು. ಹಾಗಾಗಿ ಪ್ರತಿದಿನವೂ ನಮ್ಮೊಳಗೆ ಕೌಶಲ್ಯವನ್ನು ತುಂಬಿಕೊಳ್ಳುವವ ಬಗೆಗೆ ಆಲೋಚಿಸಬೇಕು ಎಂದರು.
ಪ್ರಯತ್ನಿಸುತ್ತಾ ಸಾಗಿದರೆ ದುಸ್ತರವಾದದ್ದು ಯಾವುದೂ ಇರಲಾರದು. ನಿರಂತರ ಪ್ರಯತ್ನವೇ ಯಶಸ್ಸಿನ ಗುಟ್ಟು. ನಾವು ಬಲಹೀನರಾದಷ್ಟೂ ಸಮಾಜ ನಮ್ಮನ್ನು ಪೀಡಿಸುತ್ತದೆ. ಹಾಗಾಗಿ ಬಲಶಾಲಿಗಳಾಗಿ ಬದುಕಬೇಕು, ಆದರೆ ಆ ಬಲ ಮತ್ತೊಬ್ಬರನ್ನು ಶೋಷಿಸುವುದಕ್ಕೆ ಬಳಕೆಯಾಗಬಾರದು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿಯು ತರಗತಿಗಳ ಉದ್ಘಾಟನೆ
ನಮ್ಮ ದೇಶಕ್ಕೆ ಭವ್ಯವಾದ ಇತಿಹಾಸವಿದೆ. ಆಧುನಿಕ ಜ್ಞಾನ ವಿಜ್ಞಾನಗಳು ಕಂಡು ಹಿಡಿದಿರುವ ನೂರಾರು ಸಂಗತಿಗಳನ್ನು ನಮ್ಮ ಪೂರ್ವಜರು ತಮ್ಮ ಜ್ಞಾನದೃಷ್ಟಿಯಿಂದ ಕಂಡುಕೊಂಡಿದ್ದರು. ಅಂತಹ ಸಮರ್ಥ ಪೂರ್ವಜರ ಉತ್ತರಾಧಿಕಾರಿಗಳಾಗಿ ನಾವಿದ್ದೇವೆ ಎಂಬ ಹೆಮ್ಮೆ ನಮ್ಮೊಳಗೆ ಅಡಕವಾಗಿರಬೇಕು. ನಮ್ಮ ಇತಿಹಾಸವನ್ನು ತಿಳಿದುಕೊಳ್ಳದೆ ನಾವು ಉತ್ಕೃಷ್ಟತೆಯನ್ನು ಸಾಧಿಸಲಾರೆವು ಎಂದರು.
ವಿದ್ಯಾರ್ಥಿಗಳು 10 ಗ್ರಾಮ್‌ನ ಪೆನ್ನಿನ ಮುಖಾಂತರ ಹೆತ್ತವರ ತಲೆಯ ಮೇಲಿರುವ ಟನ್‌ಗಟ್ಟಳೆ ಭಾರವನ್ನು ಇಳಿಸಬಹುದು. ಆದರೆ ಅದಕ್ಕೆ ಇಚ್ಚಾಶಕ್ತಿ ಬೇಕು. ಛಲ ನಮ್ಮೊಳಗಿರಬೇಕು. ಸಮಾಜಮುಖಿ ಜೀವನ ನಡೆಸುವುದಕ್ಕೆ ನಮ್ಮ ಶಿಕ್ಷಣ, ನಮ್ಮ ಸಂಸ್ಕಾರ ಅನುವು ಮಾಡಿಕೊಡಬೇಕು. ದೇಶದ ಬಗೆಗೆ ಅಭಿಮಾನವನ್ನು ಹೊಂದಿ ನಾವು ಕಾರ್ಯತತ್ಪರರಾಗಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, ಬಲಿ ಕೊಡುವ ಸಂದರ್ಭದಲ್ಲಿ ಕುರಿ – ಕೋಣಗಳನ್ನೇ ಆಯ್ಕೆ ಮಾಡಲಾಗುತ್ತದೆ. ಯಾವ ನಂಬಿಕೆಯೂ ಹುಲಿ – ಸಿಂಹದ ಬಲಿಯನ್ನು ಬಯಸುವುದಿಲ್ಲ. ಹಾಗಾಗಿ ಧೈರ್ಯಶಾಲಿಗಳಾಗಿ ಬದುಕಬೇಕು ಮತ್ತು ರಾಷ್ಟಪ್ರೇಮಿಗಳಾಗಿರಬೇಕು ಎಂದು ಹೇಳಿದರು.
ವಿದ್ಯಾರ್ಥಿನಿಯರಾದ ಶ್ರೀವಿಭಾ, ಮಂದಿರಾ ಕಜೆ ಹಾಗೂ ಆದ್ಯಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಶ್ರಾವಣಿ ಸ್ವಾಗತಿಸಿ, ವಿದ್ಯಾರ್ಥಿನಿ ವರ್ಷಲಕ್ಷ್ಮೀ ವಂದಿಸಿದರು. ವಿದ್ಯಾರ್ಥಿನಿ ವೈಷ್ಣವಿ ಪೈ ನಿರೂಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


