ಕೊಪ್ಪಳ : ಅಯೋಧ್ಯೆಯ ರಾಮ ಮಂದಿರದ ಹುಂಡಿ ಎಣಿಕೆ ವೇಳೆ ಲೂಟಿ ನಡೆದಿರುವ ವಿವಾದದ ಬೆನ್ನಲ್ಲೇ, ಈಗ ಹನುಮ ಜನ್ಮ ಸ್ಥಳವೆಂದೇ ಪ್ರಸಿದ್ಧಿಯಾದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ (Anjanadri Hill) ಹುಂಡಿ ಎಣಿಕೆ ಪ್ರಕ್ರಿಯೆಯೂ ತೀವ್ರ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕಳೆದ ಜುಲೈ 3ರಂದು (ಶುಕ್ರವಾರ) ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣದ ಎಣಿಕೆ ಕಾರ್ಯ ನಡೆದಿತ್ತು. ಸಾಮಾನ್ಯವಾಗಿ ಹುಂಡಿ ಎಣಿಕೆ ಮುಗಿದ ತಕ್ಷಣವೇ ಇಲಾಖೆಯು ಸಂಗ್ರಹವಾದ ಒಟ್ಟು ಮೊತ್ತದ ಅಧಿಕೃತ ಮಾಹಿತಿಯನ್ನು ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ಬಿಡುಗಡೆ ಮಾಡುವುದು ವಾಡಿಕೆ.

ಆದರೆ, ಈ ಬಾರಿ ಎಣಿಕೆ ಮುಗಿದು ಭರ್ತಿ 4 ದಿನಗಳ ಕಾಲ ತಾಲೂಕು ಆಡಳಿತ ಹಾಗೂ ಅಧಿಕಾರಿಗಳು ಸಂಪೂರ್ಣ ಮೌನ ವಹಿಸಿದ್ದರು. ಇಂದು (ಜುಲೈ 7) ತಡವಾಗಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದ್ದು, ಅಧಿಕಾರಿಗಳ ಈ ನಿಗೂಢ ನಡೆ ಸದ್ಯ ಸಾರ್ವಜನಿಕ ವಲಯದಲ್ಲಿ ಹಾಗೂ ಹನುಮ ಭಕ್ತರಲ್ಲಿ ಹಲವು ಸಂಶಯಗಳನ್ನು ಹುಟ್ಟುಹಾಕಿದೆ.
94 ದಿನಗಳಲ್ಲಿ ಬರೊಬ್ಬರಿ 71.77 ಲಕ್ಷ ರೂ. ಸಂಗ್ರಹ!
ಇದಕ್ಕೂ ಮುನ್ನ ಮಾರ್ಚ್ 23 ರಂದು ಅಂಜನಾದ್ರಿಯ ಹುಂಡಿ ಎಣಿಕೆ ಮಾಡಲಾಗಿತ್ತು. ಅದಾದ ನಂತರದ ಕಳೆದ 94 ದಿನಗಳ ಅವಧಿಯಲ್ಲಿ ದೇಶದ ವಿವಿಧ ಮೂಲೆಗಳಿಂದ ಬಂದ ಭಕ್ತರು ದೇವಸ್ಥಾನದ ಹುಂಡಿಗೆ ಭರಪೂರ ಕಾಣಿಕೆ ಅರ್ಪಿಸಿದ್ದಾರೆ. ಜುಲೈ 3 ರಂದು ನಡೆದ ಎಣಿಕೆಯಲ್ಲಿ ಒಟ್ಟು 71,77,460 ರೂಪಾಯಿ ನಗದು ಹಣ ಸಂಗ್ರಹವಾಗಿದೆ ಎಂದು ತಾಲೂಕು ಆಡಳಿತ ತಡವಾಗಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ರಾಮ ಮಂದಿರದ ಹುಂಡಿ ವಿವಾದದ ಬೆನ್ನಲ್ಲೇ ಅಂಜನಾದ್ರಿಯಲ್ಲೂ ಮಾಹಿತಿ ನೀಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿರುವುದು ಸಾರ್ವಜನಿಕರ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪಾರದರ್ಶಕತೆಯ ಕುರಿತು ಪ್ರಶ್ನೆಗಳು ಏಳುತ್ತಿವೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

