Breaking News

‘ಅಟಲ್ ಟಿಂಕರಿಂಗ್ ಲ್ಯಾಬ್ ಫೆಸ್ಟ್ – ಸವಿಸ್ಕಾರ್ 2K26’ ಮುಕ್ತಾಯ: ಬಾಲ ವಿಕಾಸ ಶಾಲೆ ಮಾಣಿಗೆ ಸಮಗ್ರ ಪ್ರಶಸ್ತಿ

ಬಂಟ್ವಾಳ: ಇಲ್ಲಿನ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಬಂಟ್ವಾಳ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ “ಅಟಲ್ ಟಿಂಕರಿಂಗ್ ಲ್ಯಾಬ್ ಫೆಸ್ಟ್ – ಸವಿಸ್ಕಾರ್ 2K26” ಕಾರ್ಯಕ್ರಮದ ಸಮಾರೋಪ ಸಮಾರಂಭವು (ಆಗಸ್ಟ್ 11) ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಸಮಾರೋಪ ಸಮಾರಂಭದಲ್ಲಿ ಆಯೋಜಿಸಲಾಗಿದ್ದ ವಿವಿಧ ವಿಜ್ಞಾನ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ-ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಮಗ್ರ ಪ್ರಥಮ ಸ್ಥಾನ ಬಾಲ ವಿಕಾಸ ಇಂಗ್ಲಿಷ್ ಮೀಡಿಯಂ ಶಾಲೆ, ಮಾಣಿಗೆ ಹಾಗೂ ಸಮಗ್ರ ದ್ವಿತೀಯ ಸ್ಥಾನ ಬಂಟ್ವಾಳ ರಘುರಾಮ ಮುಕುಂದ ಪ್ರಭು ಪಬ್ಲಿಕ್ ಸ್ಕೂಲ್ಗೆ ಸಿಕ್ಕಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ನಾಗೇಶ್ ಕಲ್ಲಡ್ಕ ಅವರು, “ವಿದ್ಯಾರ್ಥಿಗಳು ಕೇವಲ ಅಧ್ಯಯನಕ್ಕೆ ಸೀಮಿತವಾಗದೆ ಹೊಸ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಇದರೊಂದಿಗೆ ದೇಶದ ಅಭಿವೃದ್ಧಿಯ ಬಗ್ಗೆಯೂ ಆಲೋಚಿಸುವ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಪ್ರಶಸ್ತಿ ವಿಜೇತೆ, ರಂಗಭೂಮಿ ಹಾಗೂ ಚಲನಚಿತ್ರ ನಟಿ ರೂಪಶ್ರೀ ವರ್ಕಾಡಿ ಅವರು ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶಗಳು ಅತ್ಯಂತ ಮೌಲ್ಯಯುತವಾದವು. ಇಂತಹ ವಿಜ್ಞಾನ ಫೆಸ್ಟ್‌ಗಳ ಅವಕಾಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಹಾರೈಸಿದರು.

ಇದನ್ನೂ ಓದಿ: ಬಂಟ್ವಾಳ: 303 ಬಗೆಯ ಕರಾವಳಿ ಖಾದ್ಯಗಳ ಸೊಗಡು: ಅಮ್ಟೂರಿನ ದೇವ ಮಾತ ಶಾಲೆಯಲ್ಲಿ ವಿಜೃಂಭಣೆಯ ಆಟಿ ಕೂಟ

ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ನಂದ ಅವರು ವಿಜೇತರ ಪಟ್ಟಿಯನ್ನು ವಾಚಿಸಿದರು. ಸಮಾರಂಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮಿ ರಘುರಾಜ್, ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರಾದ ಕಿಶನ್ ಮೊಡಪ್ಪಾಡಿ, ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ ಹಾಗೂ ಪ್ರಾಂಶುಪಾಲರಾದ
ವಸಂತ್ ಬಲ್ಲಾಳ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿ, ಸಂಧ್ಯಾ ಕಾಮತ್ ವಂದನಾರ್ಪಣೆ ಮಾಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *