ಹೆಡ್‌ಲೈಟ್ ಇಲ್ಲದ ಕೆಕೆಆರ್‌ಟಿಸಿ ಬಸ್; ಮೊಬೈಲ್ ಟಾರ್ಚ್ ಬೆಳಕಲ್ಲೇ ಸಂಚಾರ

ಕಲಬುರಗಿ: “ಇದು ಕರ್ನಾಟಕ ಸರ್ಕಾರದ ಹೊಸ ‘ಹೆಡ್‌ಲೈಟ್ ತಂತ್ರಜ್ಞಾನವೇ’?” – ಸಾರ್ವಜನಿಕ ಸಾರಿಗೆಯ ಇಂದಿನ ದುಸ್ಥಿತಿಯನ್ನು ನೋಡಿ ಸಾರ್ವಜನಿಕರು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸರ್ಕಾರಿ ಬಸ್‌ವೊಂದರಲ್ಲಿ ಹೆಡ್‌ಲೈಟ್ ಕೆಟ್ಟುಹೋಗಿದ್ದರಿಂದ, ಕತ್ತಲ ರಸ್ತೆಯಲ್ಲಿ ಚಾಲಕ ಬಸ್ ಓಡಿಸಲು ಕಂಡಕ್ಟರ್ ತನ್ನ ಮೊಬೈಲ್ ಫೋನ್‌ನ ಟಾರ್ಚ್ ಲೈಟ್ ಆನ್ ಮಾಡಿ ದಾರಿ ತೋರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿವೆ.

ಲಭ್ಯವಿರುವ ಮಾಹಿತಿ ಪ್ರಕಾರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (KKRTC) ಸೇರಿದ KA-28 F-1985 ನೋಂದಣಿ ಸಂಖ್ಯೆಯ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಕಲಬುರಗಿ ಮತ್ತು ಚಿಂಚೋಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಈ ಬಸ್‌ನಲ್ಲಿ ಕನಿಷ್ಠ ಸುರಕ್ಷತಾ ಸೌಲಭ್ಯವಾದ ಹೆಡ್‌ಲೈಟ್ ಇಲ್ಲದಿದ್ದರೂ, ಪ್ರಯಾಣಿಕರನ್ನು ತುಂಬಿಕೊಂಡು ಕತ್ತಲಲ್ಲಿ ಅಪಾಯಕಾರಿಯಾಗಿ ಚಲಿಸುತ್ತಿತ್ತು. ಈ ದೃಶ್ಯಗಳು ಸದ್ಯ ವೈರಲ್ ಆಗಿದ್ದು, ಪ್ರಯಾಣಿಕರ ಜೀವದ ಜೊತೆ ಇಷ್ಟೊಂದು ಬೇಜವಾಬ್ದಾರಿಯಿಂದ ಚೆಲ್ಲಾಟವಾಡಲು ಹೇಗೆ ಅನುಮತಿ ನೀಡಲಾಯಿತು ಎಂದು ಜನರು ಪ್ರಶ್ನಿಸುತ್ತಿದ್ದಾರೆ.

Advertisement

ಇಲ್ಲಿದೆ ನೋಡಿ ಸ್ಟೋರಿ:

ವಾಹನಕ್ಕೆ ಹೆಡ್‌ಲೈಟ್ ಎಂಬುದು ಐಷಾರಾಮಿ ಸೌಕರ್ಯವಲ್ಲ, ಅದು ಅತ್ಯಂತ ಕನಿಷ್ಠ ಹಾಗೂ ಕಡ್ಡಾಯ ಸುರಕ್ಷತಾ ನಿಯಮವಾಗಿದೆ. ಇಂತಹ ಸ್ಥಿತಿಯಲ್ಲಿ ಬಸ್ ಚಲಾಯಿಸುವುದರಿಂದ ಪ್ರಯಾಣಿಕರು, ಸಿಬ್ಬಂದಿ ಹಾಗೂ ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಸವಾರರ ಜೀವಕ್ಕೆ ನೇರ ಕುತ್ತು ತಂದಂತಾಗುತ್ತದೆ. ಒಂದು ವೇಳೆ ಯಾವುದೇ ಖಾಸಗಿ ವಾಹನ ಹೆಡ್‌ಲೈಟ್ ಇಲ್ಲದೆ ಸಂಚರಿಸಿದರೆ ಸಾರಿಗೆ ಅಧಿಕಾರಿಗಳು ತಕ್ಷಣವೇ ದಂಡ ವಿಧಿಸಿ ಸೀಜ್ ಮಾಡುತ್ತಾರೆ. ಆದರೆ, ಸರ್ಕಾರಿ ಬಸ್‌ಗಳ ವಿಷಯದಲ್ಲಿ ಈ ನಿಯಮಗಳು ಅನ್ವಯಿಸುವುದಿಲ್ಲವೇ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಂಟ್ವಾಳ: ಬಸ್‌ಗಾಗಿ ಕಾಯುತ್ತಿದ್ದ ಪಿಯುಸಿ ವಿದ್ಯಾರ್ಥಿನಿ ಮೇಲೆ ಮಚ್ಚಿನಿಂದ ಭೀಕರ ದಾಳಿ ಮಾಡಿದ ಜವ್ವರ್

ಈ ಘಟನೆಯು ಕೇವಲ ತಾಂತ್ರಿಕ ದೋಷದ ಪ್ರಶ್ನೆಯಾಗಿ ಉಳಿದಿಲ್ಲ, ಬದಲಿಗೆ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿಯ ಮೇಲೂ ಬೆಳಕು ಚೆಲ್ಲಿದೆ. ಮೂಲಗಳ ಪ್ರಕಾರ, ರಾಜ್ಯ ಸರ್ಕಾರವು ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಗೆ (Shakti Scheme) ಸಂಬಂಧಿಸಿದಂತೆ ತನ್ನ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ಒಟ್ಟು 4,573 ಕೋಟಿ ರೂ, ಬಾಕಿ ಮರುಪಾವತಿಯನ್ನು ಉಳಿಸಿಕೊಂಡಿದೆ. ಈ ಬೃಹತ್ ಮೊತ್ತದ ಬಾಕಿ ಹಣ ಬಿಡುಗಡೆಯಾಗದ ಕಾರಣ, ಸಾರಿಗೆ ಸಂಸ್ಥೆಗಳು ಬಸ್‌ಗಳ ಕನಿಷ್ಠ ನಿರ್ವಹಣೆ ಮತ್ತು ರಿಪೇರಿಗೂ ಹಣವಿಲ್ಲದೆ ತತ್ತರಿಸುತ್ತಿವೆಯೇ ಎಂಬ ಟೀಕೆಗಳು ಮತ್ತೆ ತೀವ್ರಗೊಂಡಿವೆ.

ಆರ್ಥಿಕ ಪರಿಸ್ಥಿತಿ ಏನೇ ಇದ್ದರೂ, ಸಾರ್ವಜನಿಕರ ಜೀವದ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಬಸ್‌ಗೆ ಫಿಟ್‌ನೆಸ್ ಸರ್ಟಿಫಿಕೇಟ್ (FC) ನೀಡಿದ ಅಧಿಕಾರಿ ಯಾರು ಮತ್ತು ಇಂತಹ ಸ್ಥಿತಿಯಲ್ಲೂ ಬಸ್ ರಸ್ತೆಗಿಳಿಸಲು ಒಪ್ಪಿಗೆ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *