ಇಸ್ಲಾಮಾಬಾದ್: ಪಾಕಿಸ್ತಾನದ ನೆಲದಲ್ಲಿ ಆಶ್ರಯ ಪಡೆದಿರುವ ಭಾರತ ವಿರೋಧಿ ಭಯೋತ್ಪಾದಕರಿಗೆ ಈಗ ಕಾಲ ಸಂಚಕಾರ ಬಂದಂತಿದೆ. ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಪ್ರಮುಖ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿಯನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇದು ಪಾಕಿಸ್ತಾನದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ‘ಟಾರ್ಗೆಟೆಡ್ ಕಿಲ್ಲಿಂಗ್ಸ್’ (Targeted Killings) ಸರಣಿಯ ಮುಂದುವರಿದ ಭಾಗವಾಗಿದೆ.
ಲಷ್ಕರ್ ಸಂಘಟನೆಯಲ್ಲಿ ಪ್ರಭಾವಿಯಾಗಿದ್ದ ಶೇಖ್ ಯೂಸುಫ್ ಅಫ್ರಿದಿ ಮೇಲೆ ಅಪರಿಚಿತರು ಏಕಾಏಕಿ ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಂತಕರು ಯಾರು ಮತ್ತು ಎಲ್ಲಿಂದ ಬಂದವರು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಈ ಹತ್ಯೆಯ ಬೆನ್ನತ್ತಿದ್ದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.

ಇತ್ತೀಚಿನ ತಿಂಗಳುಗಳಲ್ಲಿ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್‌ನಂತಹ ಉಗ್ರ ಸಂಘಟನೆಗಳಿಗೆ ಸೇರಿದ ಕನಿಷ್ಠ 30ಕ್ಕೂ ಹೆಚ್ಚು ಪ್ರಮುಖ ಭಯೋತ್ಪಾದಕರು ಇದೇ ರೀತಿ ನಿಗೂಢ ಹತ್ಯೆಗೆ ಒಳಗಾಗಿದ್ದಾರೆ. ಪಾಕಿಸ್ತಾನದ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್‌ನಂತಹ ಉಗ್ರ ನಾಯಕರ ಆಪ್ತ ವಲಯದವರು ಒಬ್ಬೊಬ್ಬರಾಗಿ ಹತರಾಗುತ್ತಿರುವುದು ಉಗ್ರ ಸಂಘಟನೆಗಳಲ್ಲಿ ನಡುಕ ಹುಟ್ಟಿಸಿದೆ.
ಇದನ್ನೂ ಓದಿ: ಸಿಖ್ ಯುವತಿಯರ ಮತಾಂತರಕ್ಕೆ ಪಾಕ್ ಗ್ಯಾಂಗ್‌ಗಳಿಂದ 10 ಲಕ್ಷ ರೂ. ಆಮಿಷ?;ಕೌರ್ ಟು ಖಾನ್ ಆತಂಕ

ಒಂದು ಕಾಲದಲ್ಲಿ ಉಗ್ರರಿಗೆ ‘ಸ್ವರ್ಗ’ ಎನ್ನಲಾಗುತ್ತಿದ್ದ ಪಾಕಿಸ್ತಾನದ ರಸ್ತೆಗಳಲ್ಲಿ ಈಗ ಭಯೋತ್ಪಾದಕರು ಮುಕ್ತವಾಗಿ ಓಡಾಡಲು ಭಯಪಡುವಂತಾಗಿದೆ. ಈ ನಿಗೂಢ ಹತ್ಯೆಗಳು ಉಗ್ರರ ಬೆನ್ನೆಲುಬನ್ನು ಮುರಿಯುತ್ತಿದ್ದು, ಅವರ ನೆಟ್‌ವರ್ಕ್ ಅನ್ನು ದುರ್ಬಲಗೊಳಿಸುತ್ತಿವೆ. ಈ ಹತ್ಯೆಗಳ ಹಿಂದೆ ಯಾರು ಇದ್ದಾರೆ ಎಂಬ ಚರ್ಚೆ ಜಾಗತಿಕ ಮಟ್ಟದಲ್ಲಿ ತೀವ್ರವಾಗಿದೆ.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

