ಗ್ರಾಮೀಣ ನಿವೇಶನ, ಕಟ್ಟಡ ನಿರ್ಮಾಣ ತಾಂತ್ರಿಕ ಅನುಮೋದನೆ ಸಡಿಲಿಕೆಗೆ ಆಗ್ರಹ: ನಗರಾಭಿವೃದ್ಧಿ ಸಚಿವರಿಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಮನವಿ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ ವಿನ್ಯಾಸ ಅನುಮೋದನೆ (Layout Approval) ಹಾಗೂ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ತಾಂತ್ರಿಕ ಅನುಮೋದನೆ ಪಡೆಯುವಾಗ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ವಿಧಾನ ಪರಿಷತ್ ಸದಸ್ಯ (MLC) ಕಿಶೋರ್ ಕುಮಾರ್ ಪುತ್ತೂರು ಅವರು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಹಿಂದೆ ಭೂ ಪರಿವರ್ತನೆಯಾದ ಜಮೀನಿನ ಒಂದು ಭಾಗಕ್ಕೆ ಅನುಮೋದನೆ ದೊರೆತಿದ್ದು, ಉಳಿದ ಭಾಗಕ್ಕೆ ಪ್ರಸ್ತುತ ನಿಯಮಗಳ ನೆಪದಲ್ಲಿ ಅನುಮೋದನೆ ನಿರಾಕರಿಸುವ ಪ್ರಕರಣಗಳಿಗೆ ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕು. ಭೂ ಪರಿವರ್ತನೆಯಾಗಿ ಕಟ್ಟಡ ನಿರ್ಮಿಸಿದ್ದರೂ, ಸ್ಥಳೀಯ ಸಂಸ್ಥೆಯಿಂದ ದಾಖಲೆ ಪಡೆಯದ ಹಳೆಯ ಪ್ರಕರಣಗಳನ್ನು ನಿಯಮಾನುಸಾರ ಸಕ್ರಮಗೊಳಿಸಬೇಕು.

ತಾಂತ್ರಿಕ ಅನುಮೋದನೆ ಸಿಕ್ಕ ನಂತರ ಕಮೆಂಸ್‌ಮೆಂಟ್ ಸರ್ಟಿಫಿಕೇಟ್ (CC) ಹಾಗೂ ಕಂಪ್ಲೀಷನ್ ಸರ್ಟಿಫಿಕೇಟ್ ಪಡೆಯಲು ಆಗುತ್ತಿರುವ ವಿಳಂಬ ತಪ್ಪಿಸಲು ಕಾಲಮಿತಿ ನಿಗದಿಪಡಿಸಬೇಕು. ಸರ್ಕಾರದಿಂದ 94C ಹಾಗೂ 94CC ಅಡಿ ಹಕ್ಕುಪತ್ರ ಪಡೆದ ಬಡ ಮತ್ತು ಮಧ್ಯಮ ವರ್ಗದ ಜನರು ಮನೆ ನಿರ್ಮಿಸಲು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ಎದುರಾಗುತ್ತಿರುವ ತಾಂತ್ರಿಕ ತೊಡಕುಗಳನ್ನು ಸಡಿಲಗೊಳಿಸಬೇಕು.

ಇದನ್ನೂ ಓದಿ: ಅಂಗನವಾಡಿ ಮಕ್ಕಳ ಆಹಾರ ಸುರಕ್ಷತೆಗೆ ಸಚಿವ ಯು.ಟಿ. ಖಾದರ್ ಸೂಚನೆ: ಮೂಡುಶೆಡ್ಡೆ MSPC ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಅಧಿಕಾರಿಗಳು

ನಿರ್ಮಿತ ಕಟ್ಟಡಗಳ ವಿಸ್ತರಣೆ, ಹೆಚ್ಚುವರಿ ಮಹಡಿ ನಿರ್ಮಾಣ ಹಾಗೂ ಕಾನೂನುಬದ್ಧ ಭೂ ಬಳಕೆ ಬದಲಾವಣೆಗೆ ಪರಿಷ್ಕೃತ ವಿನ್ಯಾಸ ಅನುಮೋದನೆ ನೀಡಲು ಸರಳ ಕಾರ್ಯವಿಧಾನ ರೂಪಿಸಬೇಕು. ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸಂಪೂರ್ಣ ಪಾರದರ್ಶಕ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಬೇಕು. ಅರ್ಜಿಯ ಸ್ಥಿತಿ, ತಾಂತ್ರಿಕ ಆಕ್ಷೇಪಣೆ ಹಾಗೂ ವಿಲೇವಾರಿ ಹಂತಗಳ ಮಾಹಿತಿ ಆನ್‌ಲೈನ್‌ನಲ್ಲೇ ಸಿಗುವಂತಾಗಬೇಕು. ಅರ್ಜಿಗಳನ್ನು ‘ಸಕಾಲ’ ಕಾಯ್ದೆಯಡಿ ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮಂಗಳೂರು ನಗರದ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 9 ಲಕ್ಷ ಟನ್‌ಗೂ ಹೆಚ್ಚು ಕಸ ಸಂಗ್ರಹವಾಗಿದ್ದು, ಅದನ್ನು ತಕ್ಷಣ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ವಿನಂತಿಸಿದರು. ಮಂಗಳೂರಿನ ಸ್ವಚ್ಛತೆಗೆ ರಾಮಕೃಷ್ಣ ಮಿಷನ್ ಕೈಗೊಂಡ ಕಾರ್ಯಗಳನ್ನು ಶ್ಲಾಘಿಸಿದ ಅವರು, ಜಿಲ್ಲೆಯ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಹಾಗೂ ಜನ ಶಿಕ್ಷಣ ಟ್ರಸ್ಟ್‌ನ ಕೃಷ್ಣ ಮೂಲ್ಯ ಅವರ ಶ್ರಮವನ್ನು ಸಭೆಯಲ್ಲಿ ಪ್ರಸ್ತಾಪಿಸಿ, ಮಂಗಳೂರಿನ ನೈರ್ಮಲ್ಯೀಕರಣಕ್ಕೆ ವಿಶೇಷ ಗಮನ ನೀಡುವಂತೆ ಸಚಿವರಲ್ಲಿ ಕೋರಿದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

 

Leave a Reply

Your email address will not be published. Required fields are marked *