ಪುತ್ತೂರು: ಪುತ್ತೂರು ಸಹಾಯಕ ಆಯುಕ್ತರ (ಎಸಿ) ಕಚೇರಿಯಲ್ಲಿ ಅಧಿಕೃತ ಸಭೆ ನಡೆಯುತ್ತಿದ್ದ ಸಂದರ್ಭದಲ್ಲೇ ಭೂ ನ್ಯಾಯ ಮಂಡಳಿ ಸದಸ್ಯ ನಿರಂಜನ್ ರೈ ಮಠಂದಬೆಟ್ಟು ಅವರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಧೃತಿಗೆಡಿಸುವ ಘಟನೆ ಜುಲೈ 8ರಂದು ಸಂಭವಿಸಿದೆ.
ಮೃತ ನಿರಂಜನ್ ರೈ ಅವರು ಕರಾವಳಿಯ ಜನಪದ ಕ್ರೀಡೆ ಕಂಬಳದ ಖ್ಯಾತ ವೀಕ್ಷಕ ವಿವರಣೆಗಾರರಾಗಿಯೂ ಗುರುತಿಸಿಕೊಂಡಿದ್ದರು. ಅವರ ಈ ಹಠಾತ್ ನಿಧನದ ಸುದ್ದಿ ಕೇಳಿ ಕಂಬಳ ಪ್ರೇಮಿಗಳು ಹಾಗೂ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಪುತ್ತೂರು ಸಹಾಯಕ ಆಯುಕ್ತೆ (AC) ಸ್ಟೆಲ್ಲಾ ವರ್ಗೀಸ್ ಅವರ ನೇತೃತ್ವದಲ್ಲಿ ಎಸಿ ಕಚೇರಿಯಲ್ಲಿ ಪುತ್ತೂರು ಭೂ ನ್ಯಾಯ ಮಂಡಳಿಯ ಮಹತ್ವದ ಸಭೆ ನಡೆಯುತ್ತಿತ್ತು. ಈ ಸಭೆಯಲ್ಲಿ ಮಂಡಳಿಯ ಸದಸ್ಯರಾಗಿದ್ದ ನಿರಂಜನ್ ರೈ ಮಠಂದಬೆಟ್ಟು ಅವರು ಕೂಡ ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಭೆಯ ಚರ್ಚೆಗಳು ನಡೆಯುತ್ತಿದ್ದಾಗಲೇ ನಿರಂಜನ್ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಅವರು ಕುಳಿತಿದ್ದ ಜಾಗದಲ್ಲೇ ಕುಸಿದು ಬಿದ್ದಿದ್ದಾರೆ.
ನಿರಂಜನ್ ರೈ ಅವರು ಸಭೆಯಲ್ಲೇ ಕುಸಿದು ಬೀಳುತ್ತಿದ್ದಂತೆ ಎಚ್ಚೆತ್ತ ಸಹಾಯಕ ಆಯುಕ್ತೆ ಹಾಗೂ ತಹಶೀಲ್ದಾರ್ ಸೇರಿದಂತೆ ಕಚೇರಿಯಲ್ಲಿದ್ದ ಇಲಾಖೆಯ ಅಧಿಕಾರಿಗಳೆಲ್ಲರೂ ತಕ್ಷಣವೇ ಸ್ಪಂದಿಸಿದ್ದಾರೆ. ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿ ಅಧಿಕಾರಿಗಳೇ ಖುದ್ದಾಗಿ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಚಿಕಿತ್ಸೆ ಫಲಕಾರಿಯಾಗದೆ ನಿರಂಜನ್ ರೈ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕರಾವಳಿಯ ಕಂಬಳ ಕ್ಷೇತ್ರಕ್ಕೆ ತಮ್ಮ ವಿಶಿಷ್ಟ ಧ್ವನಿಯ ಮೂಲಕ ದೊಡ್ಡ ಕೊಡುಗೆ ನೀಡಿದ್ದ ನಿರಂಜನ್ ರೈ ಅವರ ಅಗಲಿಕೆಗೆ ರಾಜಕೀಯ, ಸಾಮಾಜಿಕ ಹಾಗೂ ಕಂಬಳ ಕ್ಷೇತ್ರದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

