ಮಂಗಳೂರು: ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ಹೊಸ ಶೈಕ್ಷಣಿಕ ವರ್ಷದ ಪಿಯುಸಿ ತರಗತಿಗಳು ಆರಂಭವಾಗಲಿದ್ದು, ಇದರ ಬೆನ್ನಲ್ಲೇ ಕರಾವಳಿ ಸೇರಿದಂತೆ ಇಡೀ ರಾಜ್ಯದಲ್ಲಿ ಮತ್ತೆ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ತಲೆದೂರುವ ಲಕ್ಷಣಗಳು ಕಾಣಿಸುತ್ತಿವೆ. ಹಿಜಾಬ್ ಮೇಲಿನ ನಿಷೇಧವನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹಿಂದೂ ಸಂಘಟನೆಗಳು ಮತ್ತೊಮ್ಮೆ ಹೋರಾಟದ ರಣಕಹಳೆ ಮೊಳಗಿಸಿವೆ.
ಇನ್ನು ಮಾಧ್ಯಮಗಳ ಜತೆಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ (VHP) ಪ್ರಮುಖ ಮುಖಂಡ ಶರಣ್ ಪಂಪ್‌ವೆಲ್, “ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಮುಂದಾದರೆ, ಅದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಕೂಡ ಕಡ್ಡಾಯವಾಗಿ ಕೇಸರಿ ಶಾಲು ಧರಿಸಿ ತರಗತಿಗಳಿಗೆ ಬರಬೇಕು” ಎಂದು ಕರೆ ನೀಡಿದ್ದಾರೆ. ಹಿಜಾಬ್ ನಿಷೇಧದಿಂದಾಗಿ ಕಳೆದ ಕೆಲವು ವರ್ಷಗಳಿಂದ ಕಾಲೇಜುಗಳಲ್ಲಿ ಶೈಕ್ಷಣಿಕ ವಾತಾವರಣ ಸುಧಾರಿಸಿತ್ತು ಮತ್ತು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದರು. ಆದರೆ ಸರ್ಕಾರ ಈ ನಿಷೇಧ ವಾಪಸ್ ಪಡೆಯುವ ಮೂಲಕ ಮತ್ತೆ ಗೊಂದಲ ಸೃಷ್ಟಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟದ ಉಗ್ರನಿಗೆ ಶಿಕ್ಷೆ: ಮಂಗಳೂರಿನ ಗರಡಿ ಕ್ಷೇತ್ರದಲ್ಲಿ ವಿಎಚ್‌ಪಿ ವಿಶೇಷ ಪ್ರಾರ್ಥನೆ
“ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ಸರ್ಕಾರ ಮತ್ತು ಕಾಲೇಜು ಆಡಳಿತ ಮಂಡಳಿಗಳು ಮುಕ್ತ ಅವಕಾಶ ನೀಡಬೇಕು. ಸರ್ಕಾರದ ಈ ತಾರತಮ್ಯ ನೀತಿಯ ವಿರುದ್ಧ ವಿದ್ಯಾರ್ಥಿಗಳು ರಸ್ತೆಗಿಳಿದು ಹೋರಾಟ ಮಾಡಬೇಕು. ಈ ಹೋರಾಟಕ್ಕೆ ಹಿಂದೂ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಲಿವೆ” ಎಂದು ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ. ಒಂದು ವೇಳೆ ಈ ವಿವಾದದಿಂದಾಗಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ (Law and Order) ಧಕ್ಕೆ ಉಂಟಾದರೆ, ಅದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಅವರು ಇದೇ ವೇಳೆ ಎಚ್ಚರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


