ಉಡುಪಿ: ಕರಾವಳಿಯ ದೈವಾರಾಧನೆ ಮತ್ತು ಮಣ್ಣಿನ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ತಮ್ಮ ಸಾಂಪ್ರದಾಯಿಕ ಬೇರುಗಳನ್ನು ಮರೆತಿಲ್ಲ. ಇತ್ತೀಚೆಗೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೆರಾಡಿಯಲ್ಲಿರುವ ತಮ್ಮ ಹಿರಿಯರ ಮನೆಯಲ್ಲಿ ನಡೆದ ಧಾರ್ಮಿಕ ಆಚರಣೆಗಳು ಹಾಗೂ ಯಕ್ಷಗಾನ ಹರಕೆ ಪ್ರದರ್ಶನದ ಸುಂದರ ಮತ್ತು ಭಾವುಕ ಕ್ಷಣಗಳ ವಿಡಿಯೋವನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮನೆಯ ಹಿರಿಯರು ಕಟ್ಟಿಕೊಂಡ ಹರಕೆಯಂತೆ ನಡೆದ ಈ ದೈವಿಕ ಆಚರಣೆಯ ಝಲಕ್ ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
“ನಮ್ಮ ಬೇರುಗಳು ನಮ್ಮನ್ನು ವ್ಯಾಖ್ಯಾನಿಸುತ್ತವೆ”: ರಿಷಬ್ ಭಾವುಕ ನುಡಿ:

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ರಿಷಬ್ ಶೆಟ್ಟಿ, ಅತ್ಯಂತ ಭಾವುಕರಾಗಿ ಸಾಲುಗಳನ್ನು ಬರೆದುಕೊಂಡಿದ್ದಾರೆ. “ಶ್ರೀ ರಾಮ ಭಜನೆ ಮತ್ತು ಯಕ್ಷಗಾನದ ಸುಂದರ ಸಂಜೆ. ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ ನಮ್ಮ ಮನೆಯಲ್ಲಿ ನಡೆದಾಗ ಮನ ತುಂಬಿದ ಕ್ಷಣಗಳು. ನಾವು ನಮ್ಮ ಬೇರುಗಳನ್ನು ವ್ಯಾಖ್ಯಾನಿಸುವುದಿಲ್ಲ, ನಮ್ಮ ಬೇರುಗಳು ನಮ್ಮನ್ನು ವ್ಯಾಖ್ಯಾನಿಸುತ್ತವೆ” ಎಂದು ಬರೆಯುವ ಮೂಲಕ ತಮಗೆ ತಮ್ಮ ಮಣ್ಣಿನ ಸಂಸ್ಕೃತಿಯ ಮೇಲಿರುವ ಭಕ್ತಿ ಹಾಗೂ ಗೌರವವನ್ನು ಮತ್ತೊಮ್ಮೆ ತೋರ್ಪಡಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಹಂಚಿಕೊಳ್ಳಲಾದ ವಿಶೇಷ ವಿಡಿಯೋದಲ್ಲಿ ರಿಷಬ್ ಶೆಟ್ಟಿ ಅವರ ಇಡೀ ಕುಟುಂಬ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಜೊತೆಯಾಗಿ ಪೂಜೆ ಸಲ್ಲಿಸಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಕಲಾವಿದರು ಮುಖಕ್ಕೆ ಬಣ್ಣ ಹಚ್ಚಿಕೊಳ್ಳುವ ಚೌಕಿಯ ದೃಶ್ಯಗಳಿಂದ ಹಿಡಿದು, ರಂಗಸ್ಥಳದಲ್ಲಿ ನಡೆಯುವ ಅದ್ಭುತ ರಂಗಪ್ರದರ್ಶನದವರೆಗಿನ ದೃಶ್ಯಗಳು ವಿಡಿಯೋದಲ್ಲಿವೆ.
ಮಗನಿಗೆ ಯಕ್ಷಗಾನ ವೇಷ:
ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ರಿಷಬ್ ಶೆಟ್ಟಿ ಅವರ ಮುದ್ದು ಮಗ ರನ್ವಿತ್ ಶೆಟ್ಟಿಗೆ ಯಕ್ಷಗಾನದ ಸಾಂಪ್ರದಾಯಿಕ ವೇಷವನ್ನು ಹಾಕಿಸಲಾಗಿತ್ತು. ಮಗನ ಯಕ್ಷಗಾನ ನಟನೆಯನ್ನು ರಿಷಬ್ ಶೆಟ್ಟಿ ದಂಪತಿ ಹಾಗೂ ಕುಟುಂಬಸ್ಥರು ಮುಂಭಾಗದಲ್ಲಿ ಕುಳಿತು ಕಣ್ಣುಂಬಿಕೊಂಡು ಸಂಭ್ರಮಿಸಿದ್ದಾರೆ. ಸ್ವತಃ ರಿಷಬ್ ಶೆಟ್ಟಿ ಅವರು ಕೂಡ ಭಜನಾ ಮಂಡಳಿಯೊಂದಿಗೆ ಸೇರಿ ಕುಣಿತ ಭಜನೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.
ಪ್ರಸ್ತುತ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಪ್ರೀಕ್ವೆಲ್ ಸಿನಿಮಾದ ಭಾರಿ ಸಿದ್ಧತೆಯಲ್ಲಿರುವ ರಿಷಬ್ ಶೆಟ್ಟಿ, ಸಿನಿಮಾ ಜಗತ್ತಿನಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಹಳ್ಳಿಯ ಸಾಂಪ್ರದಾಯಿಕ ಆಚರಣೆಗಳಿಗೆ ನೀಡುವ ಆದ್ಯತೆಯನ್ನು ಕಂಡು ಚಿತ್ರರಂಗ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

