Breaking News

ಕಳೆದುಹೋದ 6 ಪವನ್ ಚಿನ್ನದ ಬಳೆ ಹಿಂತಿರುಗಿಸಿದ ಕೇರಳ ಯುವತಿ; ಪ್ರಾಮಾಣಿಕತೆಗೆ ಒಲಿದ 1 ಲಕ್ಷ ರೂ. ನಗದು ಬಹುಮಾನ

ಸುಳ್ಯ: ಕಳೆದುಹೋಗಿದ್ದ ಒಡವೆಯನ್ನು ಸೋಷಿಯಲ್ ಮೀಡಿಯಾ ಪೋಸ್ಟ್ ನೋಡಿ ಅದರ ವಾರಸುದಾರರಿಗೆ ಪ್ರಾಮಾಣಿಕವಾಗಿ ಮರಳಿ ನೀಡಿದ ಕೇರಳದ ಯುವತಿಯೊಬ್ಬಳಿಗೆ ಭಾರಿ ಮೊತ್ತದ ನಗದು ಬಹುಮಾನ ಲಭಿಸಿದೆ. ಯುವತಿಯ ಈ ಅಪರೂಪದ ಪ್ರಾಮಾಣಿಕತೆಗೆ ಮೆಚ್ಚಿದ ಮಾಲೀಕರು ತಕ್ಷಣವೇ ಸ್ಥಳದಲ್ಲೇ 1 ಲಕ್ಷ ರೂಪಾಯಿ ನಗದು ನೀಡಿ ಗೌರವಿಸಿದ್ದಾರೆ.

ಸುಳ್ಯ ತಾಲೂಕಿನ ಅಡ್ತಾಲೆ ನಿವಾಸಿಯಾದ ಭೋಜಪ್ಪ ಅಜಿಲ ಎಂಬುವವರು ಜೂನ್ 21 ರಂದು ಜಲ್ಸೂರು ಸಮೀಪದ ಅಡ್ಕರ್ ಮ್ಯಾರೇಜ್ ಹಾಲ್‌ನಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು. ಮದುವೆ ಮುಗಿಸಿ ಅವರು ತಮ್ಮ ಕಾರನ್ನು ಹತ್ತುವ ಧಾವಂತದಲ್ಲಿ ಕೈಯಲ್ಲಿದ್ದ 6 ಪವನ್ ತೂಕದ ಚಿನ್ನದ ಬಳೆ (ಬ್ರೇಸ್‌ಲೆಟ್) ಆಕಸ್ಮಿಕವಾಗಿ ರಸ್ತೆಗೆ ಬಿದ್ದಿದೆ. ಕಾರು ಮನೆ ತಲುಪಿದ ಬಳಿಕ ಒಡವೆ ಕಳೆದುಹೋಗಿರುವುದು ಭೋಜಪ್ಪ ಅವರ ಗಮನಕ್ಕೆ ಬಂದಿದೆ. ಮದುವೆ ಮಂಟಪದ ಸುತ್ತಮುತ್ತ ಜಾಲಾಡಿದರೂ ಬಳೆ ಪತ್ತೆಯಾಗಿರಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ, ಕಳೆದುಹೋದ ಒಡವೆಯ ಫೋಟೋ ಮತ್ತು ವಿವರಗಳನ್ನು ಭೋಜಪ್ಪ ಅವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ನೆರವು ಕೋರಿದ್ದರು.

ಇದನ್ನೂ ಓದಿ:ಸುಳ್ಯ ಕೋರ್ಟ್‌ನಿಂದ ಮಹತ್ವದ ತೀರ್ಪು: ಕಳ್ಳತನ ಮತ್ತು ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್ ಆಗಿದ್ದ ಅಪರಾಧಿಗೆ ಭಾರಿ ಜೈಲು ಶಿಕ್ಷೆ ಹಾಗೂ ದಂಡ

ಅದೇ ಮದುವೆ ಸಮಾರಂಭಕ್ಕೆ ಕೇರಳದ ಚಟ್ಟಂಜಾಲು ಎಂಬ ಪ್ರದೇಶದಿಂದ ಬಂದಿದ್ದ ಯುವತಿಯೊಬ್ಬಳಿಗೆ ಮದುವೆ ಹಾಲ್‌ನ ಆವರಣದಲ್ಲಿ ಈ ಚಿನ್ನದ ಬಳೆ ಸಿಕ್ಕಿತ್ತು. ಯಾರದ್ದೋ ಬೆಲೆಬಾಳುವ ವಸ್ತು ಕಳೆದುಹೋಗಿದೆ ಎಂದು ತಿಳಿದ ಯುವತಿ ಅದನ್ನು ಭದ್ರವಾಗಿ ಇಟ್ಟುಕೊಂಡಿದ್ದರು. ಬಳಿಕ ಭೋಜಪ್ಪ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಯುವತಿಯ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಆಕೆ, ಪೋಸ್ಟ್‌ನಲ್ಲಿದ್ದ ನಂಬರ್ ಮೂಲಕ ಭೋಜಪ್ಪ ಅವರನ್ನು ಸಂಪರ್ಕಿಸಿದ್ದಾರೆ.

ತಾವು ಪತ್ತೆಹಚ್ಚಿದ್ದ ಚಿನ್ನದ ಬಳೆ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಂಡ ಯುವತಿ, ಒಡವೆಯನ್ನು ಸುರಕ್ಷಿತವಾಗಿ ಭೋಜಪ್ಪ ಅವರಿಗೆ ಹಸ್ತಾಂತರಿಸಿದ್ದಾರೆ. ಇಂದಿನ ಕಾಲದಲ್ಲೂ ಇಂತಹ ಪ್ರಾಮಾಣಿಕತೆ ಪ್ರದರ್ಶಿಸಿದ ಯುವತಿಯ ಗುಣಕ್ಕೆ ಮನಸೋತ ಭೋಜಪ್ಪ, ಕೃತಜ್ಞತೆಯ ಸಂಕೇತವಾಗಿ 1 ಲಕ್ಷ ರೂಪಾಯಿ ನಗದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಘಟನೆ ಸ್ಥಳೀಯವಾಗಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *