ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ತೀವ್ರತೆ ಕೊಂಚ ತಗ್ಗಿದೆಯಾದರೂ, ಕರ್ನಾಟಕದ ಹಲವೆಡೆ ಮುಂದಿನ ಕೆಲವು ದಿನಗಳ ಕಾಲ ವರ್ಷಧಾರೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಹಲವೆಡೆಯೂ ಗಾಳಿ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ.

ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಹಲವೆಡೆ ಸಾಧಾರಣದಿಂದ ಉತ್ತಮ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ರಾಜ್ಯದ ಘಟ್ಟ ಪ್ರದೇಶಗಳಲ್ಲಿ ಜುಲೈ 9ರಿಂದ 12ರ ವರೆಗಿನ ಅವಧಿಯಲ್ಲಿ ತೀವ್ರ ಮಳೆಯ ಕಾರಣದಿಂದಾಗಿ ಒಂದು ಅಥವಾ ಎರಡು ಸೂಕ್ಷ್ಮ ಪ್ರದೇಶಗಳಲ್ಲಿ ಭೂಕುಸಿತ (Landslide) ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಮಲೆನಾಡು ಹಾಗೂ ಘಟ್ಟ ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ಸ್ಥಳೀಯ ಸಾರ್ವಜನಿಕರು ಕಡ್ಡಾಯವಾಗಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅರಬೈಲ್ ಘಾಟ್ ಭೀಕರ ದುರಂತ: ಮೃತರ ಸಂಖ್ಯೆ 6ಕ್ಕೆ ಏರಿಕೆ; ಆಸ್ಪತ್ರೆಗೆ ಸಾಗಿಸುವಾಗ ಮತ್ತೊಬ್ಬ ಯುವಕ ಸಾವು
ರಾಜ್ಯದಲ್ಲಿ ದಾಖಲಾದ ಗರಿಷ್ಠ ಮಳೆ ವಿವರ:
ಕಳೆದ 24 ಗಂಟೆಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ರೆಕಾರ್ಡ್ ಬ್ರೇಕಿಂಗ್ ಮಳೆಯಾಗಿದ್ದು, ಅದರ ವಿವರ ಇಲ್ಲಿದೆ:
ಹೊಗದಹಳ್ಳ (ಸಕಲೇಶಪುರ, ಹಾಸನ): 196.5 ಮಿ.ಮೀ (ದಾಖಲೆಯ ಮಳೆ)
ಬಿರುನಾನಿ (ವಿರಾಜಪೇಟೆ, ಕೊಡಗು): 190.5 ಮಿ.ಮೀ
ಬೇಗಾರು (ಶೃಂಗೇರಿ, ಚಿಕ್ಕಮಗಳೂರು): 112 ಮಿ.ಮೀ
ಬಿದರಗೋಡು (ತೀರ್ಥಹಳ್ಳಿ, ಶಿವಮೊಗ್ಗ): 100.5 ಮಿ.ಮೀ
ಹಲಗೇರಿ (ಸಿದ್ದಾಪುರ, ಉತ್ತರ ಕನ್ನಡ): 94.5 ಮಿ.ಮೀ
ನೆಲ್ಲಿಕಾರು (ಮಂಗಳೂರು, ದಕ್ಷಿಣ ಕನ್ನಡ): 78.5 ಮಿ.ಮೀ
ಪಾರವಾಡ (ಖಾನಾಪುರ, ಬೆಳಗಾವಿ): 76.5 ಮಿ.ಮೀ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

