ವಿಟ್ಲ: ರಸ್ತೆ ಬದಿಗಳಲ್ಲಿ ರಾತ್ರಿ ವೇಳೆ ನಿಲ್ಲಿಸುತ್ತಿದ್ದ ಲಾರಿ ಹಾಗೂ ಇತರೆ ವಾಹನಗಳ ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳರ ಜಾಲವನ್ನು ಭೇದಿಸುವಲ್ಲಿ ವಿಟ್ಲ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಕಳವು ಮಾಡಲಾಗಿದ್ದ ಸುಮಾರು 10 ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಚೇರ್ಕಳ ನಿವಾಸಿ ಅಬ್ದುಲ್ ಶಮೀರ್ ಪಿ.ಎ. (50 ವರ್ಷ) ಮತ್ತು ಕಾಸರಗೋಡು ಜಿಲ್ಲೆಯ ಮುಟ್ಟತ್ತೋಡಿ ನಿವಾಸಿ ಅಬ್ದುಲ್ ಮಜೀದ್ (33 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳು ಕಾಸರಗೋಡಿನಿಂದ ವಾಹನಗಳಲ್ಲಿ ವಿಟ್ಲ ಪರಿಸರಕ್ಕೆ ಬರುತ್ತಿದ್ದರು. ರಾತ್ರಿ ಸಮಯದಲ್ಲಿ ಹೆದ್ದಾರಿ ಹಾಗೂ ರಸ್ತೆ ಬದಿಗಳಲ್ಲಿ ಚಾಲಕರು ನಿಲ್ಲಿಸಿ ನಿದ್ದೆ ಮಾಡುತ್ತಿದ್ದ ಅಥವಾ ನಿಲ್ಲಿಸಿ ಹೋಗಿದ್ದ ಲಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಲಾರಿಗಳ ಬ್ಯಾಟರಿಗಳನ್ನು ಅತಿ ಬೇಗನೆ ಕಳವು ಮಾಡಿ, ತಕ್ಷಣವೇ ತಮ್ಮ ವಾಹನಗಳಲ್ಲಿ ಕಾಸರಗೋಡಿಗೆ ಪರಾರಿಯಾಗುತ್ತಿದ್ದರು.

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸರಣಿ ವಾಹನಗಳ ಬ್ಯಾಟರಿ ಕಳವು ಪ್ರಕರಣಗಳು ವರದಿಯಾಗಿದ್ದವು. ಈ ಕಳ್ಳತನ ಕೃತ್ಯಗಳಿಗೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ ಅಪರಾಧ ಸಂಖ್ಯೆ: 38/2025, 39/2026, 41/2026, 123/2026 ಹಾಗೂ 126/2026 ರಂತೆ ಒಟ್ಟು ಐದು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಬ್ಯಾಟರಿ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ವಿಟ್ಲ ಪೊಲೀಸರು ಕಳ್ಳರ ಪತ್ತೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ತಾಂತ್ರಿಕ ಹಾಗೂ ಖಚಿತ ಮಾಹಿತಿಯ ಮೇರೆಗೆ ಆರೋಪಿಗಳ ಬೆನ್ನುಹತ್ತಿದ ಪೊಲೀಸ್ ತಂಡವು, ಕಾಸರಗೋಡಿಗೆ ತೆರಳಿ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ ಸದ್ಯ 10 ಬ್ಯಾಟರಿಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಬಂಟ್ವಾಳ: ಬಸ್‌ಗಾಗಿ ಕಾಯುತ್ತಿದ್ದ ಪಿಯುಸಿ ವಿದ್ಯಾರ್ಥಿನಿ ಮೇಲೆ ಮಚ್ಚಿನಿಂದ ಭೀಕರ ದಾಳಿ ಮಾಡಿದ ಜವ್ವರ್
ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇವರೊಂದಿಗೆ ಈ ಜಾಲದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

